ಜೈವಿಕ ನಿಯಂತ್ರಣ

	ಭಾರತವು ಕೃಷಿ ಆಧಾರಿತ ದೇಶ. ಭಾರತದಲ್ಲಿ ಶೇಕಡ 75 ರಷ್ಟು ಜನರು ತಮ್ಮ ಜೀವನೋಪಾಯಕ್ಕೆ ಕೃಷಿಯನ್ನು ಆಧರಿಸಿದ್ದಾರೆ. ಮೂರು ಕಡೆ ಸಮುದ್ರ ದಂಡೆ ಹೊಂದಿರುವ ಭಾರತದಲ್ಲಿ ಸಮಶಿತೋಷ್ಣ, ಉಷ್ಣ ಹಾಗೂ ಶೀತ ವಲಯಗಳು ಇರುವುದರಿಂದ ಎಲ್ಲ ತರಹದ ಬೆಳೆಗಳ ಕೃಷಿಯನ್ನು ಮಾಡುತ್ತಾರೆ. ಚೆನ್ನಾಗಿ ನೀರು ಕೊಟ್ಟು ಗೊಬ್ಬರ ಹಾಕಿ ಬೆಳೆಸಿದ ಬೆಳೆಯ ಲಾಭ ರೈತರಿಗೆ ತಲಪುವುದಕ್ಕೆ ಮೊದಲೇ ಅನೇಕ ಬಗೆಯ ಪೀಡೆ ಕೀಟಗಳು ಹಾಗೂ ರೋಗಗಳು ಬೆಳೆಗಳಿಗೆ ತಗುಲಿ ತುಂಬ ಹಾನಿಯನ್ನುಂಟುಮಾಡುತ್ತವೆ. ಈ ಪೀಡೆ ಕೀಟಗಳನ್ನು ಹಾಗೂ ರೋಗಾಣುಗಳನ್ನು ನಿಯಂತ್ರಿಸಲು ಅನೇಕ ವಿಧಾನಗಳಿವೆ. ಅವುಗಳಲ್ಲಿ ಬಿತ್ತನೆ ಕಾಲದಲ್ಲಿ ಬೆಳೆ ಪರಿವರ್ತನೆ, ಬೇಸಾಯ ಕ್ರಮಗಳಲ್ಲಿ ಪರಿವರ್ತನೆ, ಬೇಸಿಗೆಯಲ್ಲಿ ಭೂಮಿ ಉಳುಮೆ, ರಾಸಾಯನಿಕ ಕೀಟನಾಶಕಗಳ ಉಪಯೋಗ, ಜೈವಿಕ ನಿಯಂತ್ರಣ ಪದ್ಧತಿ ಹಾಗೂ ಸಮಗ್ರ ಪೀಡೆ ಹತೋಟಿ ಕ್ರಮಗಳು ಗಮನಾರ್ಹವಾದವು. ರಾಸಾಯನಿಕ ಕೀಟ ನಾಶಕಗಳು ತಕ್ಷಣ ಪೀಡೆ ಕೀಟಗಳು ಹಾಗೂ ರೋಗಾಣುಗಳನ್ನು ಸಾಯಿಸುವುದರಿಂದ ರೈತರು ಹೆಚ್ಚು ಹೆಚ್ಚಾಗಿ ಇವುಗಳನ್ನೇ ಉಪಯೋಗಿಸುತ್ತಾರೆ. ಅನೇಕ ಸಲ ನಿಗದಿ ಪಡಿಸಿದ ಪ್ರಮಾಣದ ಎರಡು-ಮೂರು ಪಟ್ಟು ಜಾಸ್ತಿ ಕೀಟನಾಶಕ ಮಿಶ್ರಮಾಡಿ ಬೆಳೆಗಳಿಗೆ ಸಿಂಪಡಿಸುತ್ತಾರೆ. ಈ ರೀತಿ ಮಾಡುವುದರಿಂದ ಪೀಡೆ ಕೀಟ ಸಾಯುವುದರ ಬದಲು ಕೀಟನಾಶಕವನ್ನು ನಿಗ್ರಹಿಸುವುದನ್ನು ಕಲಿತು ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗಿ ಬೆಳೆಗಳಿಗೆ ಹಾನಿಯನ್ನುಂಟುಮಾಡುತ್ತದೆ. ಅಧಿಕ ಪ್ರಮಾಣದ ಕೀಟ ನಾಶಕವು ನಿಸರ್ಗದಲ್ಲಿರುವ ಪೀಡೆ ಕೀಟಗಳ ಶತ್ರುಗಳಾದ ಪರೋಪಜೀವಿ ಹಾಗೂ ಪರಭಕ್ಷಕ ಕೀಟಗಳನ್ನು ಬಹುಬೇಗ ನಾಶಪಡಿಸಿ ಪೀಡೆ ಕೀಟ ಯಾವ ಅಡೆ ತಡೆ ಇಲ್ಲದೆ ವೃದ್ಧಿಯಾಗಲು ಸಹಾಯ ಮಾಡುತ್ತದೆ.

	ಆಧುನಿಕ ಕೀಟನಾಶಕಗಳ ಮಾರುಕಟ್ಟೆಯಲ್ಲಿ ಹೊಸ ಹೊಸ ತಂತ್ರಬಳಸಿ ಪೀಡೆ ಕೀಟಗಳನ್ನು ಸಾಯಿಸುವ ಹೊಸ ಬಗೆಯ ಕೀಟ ನಾಶಕಗಳು ದಿನೇ ದಿನೇ ಬರುತ್ತಲಿವೆ. ಈ ಎಲ್ಲ ಕೀಟ ನಾಶಕಗಳು ಮನುಕುಲಕ್ಕೆ ಹಾಗೂ ಇತರೆ ಪ್ರಾಣಿ ಜೀವಿಗಳಿಗೆ ತುಂಬಾ ಅಪಾಯಕಾರಿ. ಬೆಳೆಗಳ ಮೇಲೆ ಹಾಗೂ ಕಳೆಗಳ ಮೇಲೆ ಸಿಂಪಡಿಸಿದ ಕೀಟ ನಾಶಕಗಳು ಮಳೆ ನೀರಲ್ಲಿ ಬೆರೆತು ಜಲಾಶಯಗಳಲ್ಲಿ ಸಂಗ್ರಹವಾಗಿ ನೀರಿನಲ್ಲಿ ವಾಸಿಸುತ್ತಿರುವ ಜಲಚರಗಳಿಗೆ ವಿಷವಾಗಿ ಹಾನಿಯುಂಟುಮಾಡುತ್ತವೆ. ಮೇವಿನ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕವು ಆಕಳು ಹಾಗೂ ಎಮ್ಮೆಯ ಹೊಟ್ಟೆ ಸೇರಿ, ಈ ಪ್ರಾಣಿಗಳು ಕೊಡುವ ಹಾಲಿನ ಮುಖಾಂತರ ಮನುಷ್ಯರ ರಕ್ತ ಸೇರುತ್ತವೆ. ಈ ವಿಷಕಾರಿ ಪದಾರ್ಥಗಳು, ಕ್ಯಾನ್ಸರ್, ಟಿ.ಬಿ. ಹಾಗೂ ಇತರೆ ಮಾರಕ ಕಾಯಿಲೆಗಳು ಮನುಷ್ಯನ ದೇಹದಲ್ಲಿ ವೃದ್ಧಿಯಾಗಲು ಸಹಾಯ ಮಾಡುತ್ತವೆ.

	ಈಗಾಗಲೇ ವಿಷಕಾರಿ ಕೀಟನಾಶಕಗಳ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಆಗಿದೆ. ಹೀಗಾಗಿ ರೈತರು ನಿಸರ್ಗಕ್ಕೆ ಹಾನಿ ತರುವಂತಹ ಈ ಕೀಟನಾಶಕಗಳ ಉಪಯೋಗವನ್ನು ತುಂಬಾ ಕಡಿಮೆ ಮಾಡಿ ನಿಸರ್ಗಕ್ಕೆ ಹೊಂದಿಕೊಂಡು ಹೋಗುವಂತಹ ಇತರೆ ವಿಧಾನಗಳಿಂದ ಈ ಪೀಡೆ ಕೀಟಗಳ ಹಾಗೂ ರೋಗಾಣುಗಳ ನಿಯಂತ್ರಣ ಮಾಡಬೇಕಾಗಿದೆ. ಈ ದಿಸೆಯಲ್ಲಿ ಜೈವಿಕ ನಿಯಂತ್ರಣ ಪದ್ಧತಿ ತುಂಬಾ ಮುಖ್ಯವಾದುದು. ನಿಸರ್ಗದಲ್ಲಿರುವ ಪೀಡೆ ಕೀಟಗಳ ಹಾಗೂ ರೋಗಗಳ ವೈರಿಗಳನ್ನು ಉಪಯೋಗಿಸಿ ನಿಯಂತ್ರಿಸುವ ವಿಧಾನಕ್ಕೆ ಜೈವಿಕ ನಿಯಂತ್ರಣ ಪದ್ಧತಿ ಎಂದು ಕರೆಯುತ್ತಾರೆ. ಈ ವಿಧಾನವು ಸಮಗ್ರ ಹತೋಟಿ ಕ್ರಮದ ಒಂದು ಭಾಗವಾಗಿರುತ್ತದೆ. ಬರಿ ಇದೊಂದೆ ವಿಧಾನದಿಂದ ಪೀಡೆ ಕೀಟಗಳನ್ನು ಹಾಗೂ ರೋಗಾಣುಗಳನ್ನು ನಿಯಂತ್ರಿಸುವುದು ಅಸಾಧ್ಯದ ಮಾತು.

	ಈ ಜೈವಿಕ ನಿಯಂತ್ರಣ ಪದ್ಧತಿಯಲ್ಲಿ ಪೀಡೆ ಕೀಟ ಹಾಗೂ ರೋಗಾಣುವನ್ನು ಸಂಪೂರ್ಣವಾಗಿ ನಷ್ಟಪಡಿಸುವುದು ಮೂಲ ಉದ್ದೇಶವಲ್ಲ. ವಿಷಕಾರಿ ಕೀಟನಾಶಕ ಬಳಸಿದಾಗ ನಿಸರ್ಗದಲ್ಲಿದ್ದ ಸಮಗ್ರ ಕೀಟ ಸಂಖ್ಯೆಯ ಸಮತೋಲನ ಹಾಳಾಗುತ್ತದೆ. ಈ ಸಮತೋಲನ ಮತ್ತೆ ಬರುವಂತೆ ಮಾಡುವುದೇ ಜೈವಿಕ ನಿಯಂತ್ರಣದ ಮೂಲ ಉದ್ದೇಶ. ಪೀಡೆ ಕೀಟದ ಸಂಖ್ಯೆ ವೃದ್ಧಿಯಾದಾಗ, ಅವುಗಳನ್ನು ತಿಂದು ಜೀವಿಸುವ ವೈರಿಗಳ ಸಂಖ್ಯೆಯನ್ನು ವೃದ್ಧಿ ಮಾಡಿದರೆ ಪೀಡೆ ಕೀಟದ ಸಂಖ್ಯೆ ತಾನೆ ಕಡಿಮೆಯಾಗುತ್ತದೆ. ನಂತರ ಇವುಗಳ ವೈರಿಗಳ ಸಂಖ್ಯೆಯು ಕಡಿಮೆ ಆಗುತ್ತದೆ ಕೊನೆಗೆ ನೈಸರ್ಗಿಕ ಸಮತೋಲನ ಉಂಟಾಗಿ ಪೀಡೆ ಕೀಟ ಬೆಳೆಯನ್ನು ತಿಂದರೂ ಸಹ ಶೇಕಡ 5 ಕ್ಕಿಂತ ಕಡಿಮೆ ನಷ್ಟವಾಗುವುದರಿಂದ ರೈತರು ಚಿಂತಿಸುವ ಅಗತ್ಯವಿರುವುದಿಲ್ಲ. ಈ ವಿಷಯವನ್ನು ಚೆನ್ನಾಗಿ ತಿಳಿದುಕೊಂಡಿರುವ ಕೀಟ ವಿಜ್ಞಾನಿಗಳು ತುಂಬ ಕಡಿಮೆ ಜನರಿದ್ದಾರೆ. ಹೆಚ್ಚಾಗಿ ಎಲ್ಲರೂ ತಪ್ಪಾಗಿ ಭಾವಿಸುವುದೇನೆಂದರೆ ಜೈವಿಕ ನಿಯಂತ್ರಣ ಪದ್ಧತಿಯಿಂದ ಬೆಳೆಗಳ ಪೀಡೆ ಕೀಟಗಳ ಹಾಗೂ ರೋಗಾಣುಗಳ ಸಂಪೂರ್ಣ ಹತೋಟಿ ಸಾಧ್ಯ ಎಂದು! ಅದು ತಪ್ಪು.

	ನಿಸರ್ಗದಲ್ಲಿ ಯಾವ ರೀತಿ ಇಲಿಗೆ ಬೆಕ್ಕು, ಕಪ್ಪೆಗೆ ಹಾವು, ಹಾವಿಗೆ ಮುಂಗುಸಿ, ಮುಂಗುಸಿಗೆ ಹುಲಿ ಅಥವಾ ಸಿಂಹ ವೈರಿಯಾಗಿದೆಯೋ ಅದೇ ರೀತಿ ಪೀಡೆ ಕೀಟಗಳಿಗೆ ಅವುಗಳದೇ ಆದ ವೈರಿಗಳು ಇವೆ. ಅವುಗಳಲ್ಲಿ ಪ್ರಮುಖವಾದವುಗಳು, ಪರಾವಲಂಬಿ ಜೀವಿ, ಪರಭಕ್ಷಕ ಜೀವಿ ಹಾಗೂ ಕೀಟಗಳಿಗೆ ರೋಗ ತರುವ ರೋಗಾಣುಗಳು.
ಪರಾವಲಂಬಿ ಜೀವಿ (ಪ್ಯಾರಾಸೈಟ್)

	ಕೀಟದ ಜೀವನದಲ್ಲಿ ನಾಲ್ಕು ಹಂತಗಳಿವೆ. ಮೊಟ್ಟೆ, ಮರಿ, ಕೋಶ ಹಾಗೂ ಪ್ರೌಢ ಕೀಟ ಇವೇ ಆ ನಾಲ್ಕು ಹಂತಗಳು. ಮೊಟ್ಟೆ ಹಾಗೂ ಕೋಶಾವಸ್ಥೆಯಲ್ಲಿ ಕೀಟ ಆಹಾರ ಸೇವಿಸುವುದಿಲ್ಲ. ಮರಿ ಹಾಗೂ ಪ್ರೌಢ ಕೀಟಾವಸ್ಥೆಯಲ್ಲಿ ಬೆಳೆಗಳ ಭಾಗಗಳನ್ನು ತಿಂದು ನಷ್ಟ ಉಂಟು ಮಾಡುತ್ತವೆ. ಪರಾವಲಂಬಿ ಕೀಟಗಳು ಕೀಟದ ನಾಲ್ಕು ಹಂತದಲ್ಲಿ ಇರುತ್ತವೆ. ಮೊಟ್ಟೆ ಪರಾವಲಂಬಿ, ಮರಿ ಪರಾವಲಂಬಿ, ಕೋಶಾವಸ್ಥೆಯ ಪರಾವಲಂಬಿ ಹಾಗೂ ಪ್ರೌಢ ಕೀಟದ ಪರಾವಲಂಬಿ ಎಂದು ಇವುಗಳನ್ನು ಗುರುತಿಸಲಾಗುತ್ತದೆ. ಮೊಟ್ಟೆ ಪರಾವಲಂಬಿ, ಇತರೆ ಕೀಟದ ಮೊಟ್ಟೆಯಲ್ಲಿ ತಮ್ಮ ಜೀವನ ಸಂಪೂರ್ಣಗೊಳಿಸುತ್ತವೆ. ಪರಾವಲಂಬಿ ಪೀಡಿತ ಪೀಡೆ ಕೀಟದ ಮೊಟ್ಟೆಯಿಂದ ಆ ಮೊಟ್ಟೆಯ ಮರಿ ಬೆಳೆಯದೆ ಪರಾವಲಂಬಿ ಕೀಟದ ಮರಿ ಬೆಳೆದು ಪೀಡೆ ಕೀಟದ ಮರಿ ಬೆಳೆಯದಂತೆ ಮಾಡುತ್ತದೆ, ಇವುಗಳಲ್ಲಿ ಪ್ರಮುಖವಾದವುಗಳೆಂದರೆ. ಟ್ರೈಕೊಗ್ರಮ್ಮಾ ಮೊಟ್ಟೆಜೀವಿ, ಹಾಗು ಟೆಲಿನೊಮಸ್ ಮೊಟ್ಟೆಜೀವಿ, ಮರಿ ಹಂತದ ಪರಾವಲಂಬಿ ಜೀವಿಗಳು ಕೀಟದ ಮರಿ ಹಂತದಲ್ಲಿ ಅವುಗಳ ದೇಹದೊಳಗೆ ಅಥವಾ ದೇಹಕ್ಕೆ ಅಂಟಿಕೊಂಡು ಬೆಳೆಯುತ್ತವೆ. ಮರಿಯ ರಕ್ತವನ್ನು ಕುಡಿದು ಬೆಳೆಯುವ ಈ ಜೀವಿಗಳು ಪೂರ್ತಿ ಬೆಳೆದಾದ ಮೇಲೆ ಸಾಯಿಸುತ್ತವೆ. ತಾವು ಬೆಳೆಯುವವರೆಗೆ ಮರಿಯ ಅವಶ್ಯಕತೆ ಇರುವುದರಿಂದ ಈ ಮರಿ ಪರಾವಲಂಬಿ ಜೀವಿಗಳು ಪೀಡೆ ಕೀಟದ ಮರಿಗಳನ್ನು ತಕ್ಷಣ ಸಾಯಿಸುವುದಿಲ್ಲ. ಆದ್ದರಿಂದ ಪೀಡೆ ಕೀಟದ ಮರಿ ಹುಳು ಬೆಳೆಗೆ ಹಾನಿಯುಂಟು ಮಾಡುತ್ತದೆ. ಇವುಗಳಲ್ಲಿ ತುಂಬಾ ಜಾತಿಗಳು ಇವೆ, ಪ್ರಮುಖವಾದವುಗಳು ಬ್ರೆಕಾನ್ ಬಗೆ, ಕೊಟೆಸಿಯಾ ಬಗೆ, ಅಪೆಂಟಿಲಸ್ ಬಗೆ, ಇತ್ಯಾದಿ.

	ಕೋಶಾವಸ್ಥೆಯ ಪರಾವಲಂಬಿ ಜೀವಿಗಳು ಪೀಡೆ ಕೀಟದ ಕೋಶಾವಸ್ಥೆಯ ಹಂತದಲ್ಲಿ ಕೋಶದ ಒಳಗೆ ಬೆಳೆದು ಕೋಶವನ್ನು ನಷ್ಟಪಡಿಸುತ್ತವೆ. ಇವುಗಳಲ್ಲಿ ಪ್ರಮುಖವಾದವುಗಳು ಪ್ಲಾಟಿಗೆಸ್ಟರ ಬಗೆ, ಎಲಾಸ್ಮಸ್ ಬಗೆ, ಬ್ರಾಚಿಮೆರಿಯಾ ಬಗೆ, ಟ್ರೈಕೊಸ್ಪಿಲಸ್ ಬಗೆ, ಟೆಟ್ರಾಸ್ಟಿಕಸ್ ಬಗೆ. ಇದೇ ರೀತಿ ಪ್ರೌಢ ಕೀಟಗಳ ಪರಾವಲಂಬಿ ಜೀವಿಗಳು ಪೀಡೆ ಕೀಟದ ಪ್ರೌಢಾವಸ್ಥೆಯಲ್ಲಿ ದೇಹದೊಳಗೆ ಸೇರಿ ಅಥವಾ ದೇಹಕ್ಕೆ ಅಂಟಿಕೊಂಡು ರಕ್ತ ಹೀರಿ ಸಾಯಿಸುತ್ತವೆ. ಪರಾವಲಂಬಿ ಜೀವಿಗಳು ಆಸರೆ ಕೀಟವನ್ನು ತಕ್ಷಣ ಸಾಯಿಸುವುದಿಲ್ಲ. ಅವುಗಳ ಜೊತೆಗೆ ಬೆಳೆದು ತಾವು ಪೂರ್ತಿ ಬೆಳೆದ ಮೇಲೆ ಆಸರೆ ಕೀಟಗಳನ್ನು ಸಾಯಿಸುತ್ತವೆ.

ಪರಭಕ್ಷಕ ಜೀವಿಗಳು:
	ಈ ಕೀಟಗಳು ತಮ್ಮ ವೈರಿ ಕೀಟವನ್ನು ತಕ್ಷಣ ಸಾಯಿಸಿ ತಿನ್ನುತ್ತವೆ. ಇಂತಹ ಕೀಟಗಳು ವೈರಿ ಕೀಟಗಳನ್ನು ಬೇಟೆಯಾಡಲು ಸೂಕ್ತವಾದ ಅಂಗಗಳನ್ನು ಹೊಂದಿರುತ್ತವೆ. ಇವುಗಳು ಕೂಡಾ ಮೊಟ್ಟೆ, ಮರಿ, ಕೋಶ ಮತ್ತು ಪ್ರೌಢ ಕೀಟಾವಸ್ಥೆಯ ಹಂತದಲ್ಲಿ ವೈರಿ ಕೀಟಗಳನ್ನು ಭಕ್ಷಿಸುತ್ತವೆ. ಪರಭಕ್ಷಕ ಜೀವಿಗಳು ಪೀಡೆ ಕೀಟ ಹಾನಿ ಮಾಡದಂತೆ ತಕ್ಷಣ ಸಾಯಿಸುವುದರಿಂದ ಪರಾವಲಂಬಿ ಉತ್ತಮ, ಇವುಗಳಲ್ಲಿ ಪ್ರಮುಖವಾದವುಗಳು ಕ್ರೈಸೊಪರ್ಲಾ ಬಗೆ, ಗುಲಗಂಜಿ ದುಂಬಿಗಳು, ಸಿರಿಟೊರೈನಸ್ ಬಗೆ ಪ್ರಮುಖವಾದವುಗಳು.

ಕೀಟ ರೋಗಾಣುಗಳು
	ಈ ರೋಗಾಣುಗಳು ಕೇವಲ ಪೀಡೆ ಕೀಟಗಳಿಗೆ ಮಾತ್ರ ತಗಲುತ್ತವೆ. ಆದರೆ ಈ ರೋಗಾಣುಗಳು ಬೆಳೆಯಲು ವಿಶೇಷ ವಾತಾವರಣ ಬೇಕು, ಗಾಳಿಯಲ್ಲಿ ನೀರಿನ ಅಂಶ ಜಾಸ್ತಿ ಇದ್ದು ಮೋಡ ಕವಿದ ವಾತಾವರಣ ಇದ್ದರೆ ಈ ರೋಗಾಣು ವೃದ್ಧಿಯಾಗಲು ತುಂಬಾ ಸೂಕ್ತ.

	ಈ ರೋಗಾಣುಗಳಲ್ಲಿ ಶಿಲೀಂಧ್ರ, ದುಂಡಾಣು (ಬ್ಯಾಕ್ಟೀರಿಯಾ), ನಂಜುರೋಗ (ವೈರಸ್) ಎಂಬ ಬೇರೆ ಬೇರೆ ಬಗೆಗಳಿವೆ. ನಂಜು ರೋಗಾಣುಗಳು ಪ್ರತಿಯೊಂದು ಕೀಟಕ್ಕೆ ತಗಲುವುದಿಲ್ಲ ಅಂದರೆ ಒಂದು ಜಾತಿಯ ಕೀಟಕ್ಕೆ ತಗುಲುವ ವೈರಸ್ ಬೇರೆ ಜಾತಿಯ ಕೀಟಕ್ಕೆ ತಗಲುವುದಿಲ್ಲ. ಮೆಟರೈಜಿಯಂ ಬಗೆ, ನ್ಯೂಮಾರಿಯಾ ಬಗೆ, ಶಿಲೀಂಧ್ರದಲ್ಲಿ ಪ್ರಮುಖವಾದವುಗಳು. ನ್ಯೂಕ್ಲಿಯರ್ ಪೊಲಿ ಹೆಡ್ರೊಸಿಸ್ ವೈರಸ್ ರೋಗಾಣುಗಳು ಹೆಲಿಕೊವರ್ಪಾ, ಸ್ಪೊಡೆಪ್ಟೆರಾ ಹಾಗೂ ಇತರೆ ಪೀಡೆ ಕೀಟಗಳಿಗೆ ನಿಖರವಾಗಿ ರೋಗ ತಗಲಿಸಿ ಸಾಯಿಸುತ್ತವೆ. ವೈರಸ್ ರೋಗಾಣು ಪೀಡೆ ಕೀಟದ ಹೊಟ್ಟೆಯಲ್ಲಿ ವಿಷಕಣಗಳನ್ನು ಉತ್ಪತ್ತಿಮಾಡುತ್ತದೆ. ಆರೋಗ್ಯ ಕೀಟ ಈ ವಿಷಕಣಗಳನ್ನು ತಿಂದಾಗ ಅದರ ಹೊಟ್ಟೆಯಲ್ಲಿ ಸೇರಿ ವಿಷ ಪದಾರ್ಥ ಬಿಡುಗಡೆ ಆಗಿ ಹೊಟ್ಟೆಯಲ್ಲಿರುವ ಮೃದು ಚರ್ಮಕ್ಕೆ ಬಾವು ಒಂದು ಕೊನೆಗೆ ಪೀಡೆ ಕೀಟದ ಮರಿ ಹುಳು ತಲೆ ಕೆಳಗೆ ಮಾಡಿ ಗಿಡದ ಎಲೆ ಅಥವಾ ದೇಟಿಗೆ ಅಂಟಿಕೊಂಡು ಸತ್ತು ನೇತಾಡುತ್ತದೆ. ಶಿಲೀಂದ್ರಗಳು ಪೀಡೆ ಕೀಟದ ಮೈಮೇಲೆ ಬೆಳೆದು, ರಂಧ್ರಗಳ ಮುಖಾಂತರ ಹೊಟ್ಟೆ ಸೇರಿ ಪೀಡೆ ಕೀಟವನ್ನು ನಾಶಪಡಿಸುತ್ತವೆ. ಒಟ್ಟಿನಲ್ಲಿ ಈ ರೋಗಾಣುಗಳು ಚೆನ್ನಾಗಿ ಕೆಲಸ ಮಾಡಲು 2-3 ದಿನ ಮೋಡ ಕವಿದ ತೇವ ಇರುವ ವಾತಾವರಣ ತುಂಬಾ ಅವಶ್ಯಕ.
ಬೆಳೆಗಳಲ್ಲಿ ಪೀಡೆ ಕೀಟಗಳ ಜೈವಿಕ ನಿಯಂತ್ರಣ

	ಕಬ್ಬು: ಕಬ್ಬಿನ ಕಾಂಡ ಕೊರೆಯುವ ಪೀಡೆ ಕೀಟದ ಹತೋಟಿಗೆ ಟ್ರೈಕೊಗ್ರಮ್ಮಾ ಮೊಟ್ಟೆ ಪರಾವಲಂಬಿ ಜೀವಿಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇತರೆ ಬೇರೆ ಬೇರೆ ಕಾಂಡ ಕೊರೆಯುವ ಪೀಡೆ ಕೀಟಗಳ ನಿಯಂತ್ರಣಕ್ಕೆ ಆಯಿಸೊಟಿಮಾ ಬಗೆ, ಸ್ಟುರ್ಮಿಯಾಪ್ಸಿಸ್ ಬಗೆ, ಅಲರೊಗಸ್ ಬಗೆ, ಸ್ಟಿನೊಬ್ರೆಕಾನ ಬಗೆಗಳನ್ನು ಉಪಯೋಗಿಸಲಾಗುತ್ತಿದೆ. ಗೊಣ್ಣೆಹುಳ (ವೈಟ್‍ಗ್ರಬ್) ನಿಯಂತ್ರಣಕ್ಕೆ ಬ್ಯಾಸಿಲಸ್ ಪೊಪಿಲಿಯಾ, ಮೆಟಿರೈಜಿಯಂ ಅನಿಸೋಪ್ಲಿಯಾ ಶಿಲೀಂಧ್ರ ಉಪಯೋಗಿಸುತ್ತಿದ್ದಾರೆ. ಪೈರಿಲ್ಲಾ ಹುಳುವಿನ ನಿಯಂತ್ರಣಕ್ಕೆ ಎಪಿರಿಕಾನಿಯಾ ಮೆಲನೋಲ್ಯೂಕಾ, ಕಬ್ಬಿನ ಶಲ್ಕ (ಮೆಲನಾಸ್ಟಿಸ್) ಹತೋಟಿಗೆ ಎಡಿಲೆನ್‍ಸರಟಿಸ್ ಮಯೂರಿ ಹಾಗೂ ಕೈಲೊಕೊರಿಸ್ ನೈಗ್ರಿಟಾ ಉಪಯೋಗಿಸಬಹುದು.

	ಭತ್ತದ ಬೆಳೆಯಲ್ಲಿ ಜೈವಿಕ ನಿಯಂತ್ರಣ: ಭತ್ತಕ್ಕೆ ಬರುವ ಜಿಗಿ ಹುಳು (ನಿಲಪರ್ವತ ಲುಗೆನ್ಸ) ನಿಯಂತ್ರಣಕ್ಕೆ ಸಿರಿಟೊರೈನಸ್ ಲಿವಿಡಿಪೆನ್ನಿಸ್, ಭತ್ತದ ಗಂಟು ಹುಳಕ್ಕೆ ಪ್ಲಾಟಿಗೆಸ್ಟರ್ ಒರೈeóÉ, ಕಾಂಡಕೊರೆಯುವ ಹುಳಕ್ಕೆ ಮೊಟ್ಟೆ ಪರಾವಲಂಬಿ ಟ್ರೈಕೋಗ್ರಮಾ ಉಪಯೋಗಿಸಲಾಗುತ್ತಿದೆ.

	ಹತ್ತಿಯ ಬೆಳೆಯಲ್ಲಿ ಜೈವಿಕ ನಿಯಂತ್ರಣ: ಕಾಯಿ ಕೊರಕಗಳ ನಿವಾರಣೆಗೆ ಟ್ರೈಕೊಗ್ರಾಮಾ, ಬ್ರೆಕಾನ್ಸ್, ಅಪೆಂಟೆಲಿಸ್, ರೋಗಾಸ್ ಪರಾವಲಂಬಿ ಜೀವಿಗಳನ್ನು ಉಪಯೋಗಿಸಬಹುದು, ಅಲ್ಲದೆ ಹೆಲಕೊವರ್ಪಾ ಹಾಗೂ ಸ್ಪೊಡೊಪ್ಟೆರಾ ನಿವಾರಣೆಗೆ ವೈರಸ್ ರೋಗಾನು ಎನ್.ಪಿ.ವಿ. ಉಪಯೋಗಿಸಬಹುದು. ಕ್ರೈಸೊಪಲ್ಲಾ ಪರಭಕ್ಷಕ ಕೀಟವು ಎಲೆ ರಸ ಹೀರುವ ಜಿಗಿ ಹುಳುಗಳನ್ನು ಹಾಗೂ ಕಾಯಿ ಕೊರಕಗಳ ಮೊಟ್ಟೆಗಳನ್ನು ನಾಶಪಡಿಸಬಹುದು.

	ತಂಬಾಕಿನಲ್ಲಿ ಜೈವಿಕ ನಿಯಂತ್ರಣ: ಸ್ಪೊಡೊಪ್ಟೆರಾ ಪೀಡೆ ಕೀಟದ ನಿಯಂತ್ರಣಕ್ಕೆ ಟೆಲಿನೋಮಸ್ ರಿಮಸ್ ಮೊಟ್ಟೆ ಪರಾವಲಂಬಿ ಜೀವಿ ಹಾಗೂ ವೈರಸ್ ರೋಗಾಣು ಎನ್.ಪಿ.ವಿ ಗಳನ್ನು ಬಳಸಬಹುದು.

	ಬೆಳೆಕಾಳು ಬೆಳೆಗಳಲ್ಲಿ ಜೈವಿಕ ನಿಯಂತ್ರಣ: ಕಾಯಿ ಕೊರಕಗಳ ನಿಯಂತ್ರಣಕ್ಕೆ ಹೆಲಿಕೊವರ್ಪಾ ವೈರಸ್ ರೋಗಾಣು ಎನ್.ಪಿ.ವಿ, ಮರಿ ನಿಯಂತ್ರಣಕ್ಕೆ ಕೊಟೆಸಿಯಾ, ಕಾಂಪೊಲಿಟಿಸ, ಹೈಪೊಸೊಟಿರ ಉಪಯೋಗಿಸಬಹುದು ಪೀಡೆ ಕೀಟದ ಮೊಟ್ಟೆ ನಾಶಪಡಿಸಲು ಟ್ರೈಕೊಗ್ರಮಾ ಬಳಸಬಹುದು.

	ಎಣ್ಣೆ ಬೆಳೆಗಳ ಜೈವಿಕ ನಿಯಂತ್ರಣ: ಸಾಸಿವೆ ಬೆಳೆಗೆ ಬರುವ ಜಿಗಿ ಹುಳುವಿನ ಹತೋಟಿಗೆ ಕ್ರೈಸೊಪರ್ಲ, ಕೈಲೊಮಿನಾಸ್, ಭಕ್ಷಕ ಕೀಟ ಉಪಯೋಗಿಸಬಹುದು. ಕಡ್ಲೆಕಾಯಿಗೆ ಬರುವ ಗೊಣ್ಣೆಹುಳ (ವೈಟ್‍ಗ್ರಬ್) ನಿಯಂತ್ರಣಕ್ಕೆ ಹಿಂದೆ ಹೇಳಿದ ಉಪಾಯ ಅನುಸರಿಸಬೇಕು.

	ತೆಂಗಿನ ಬೆಳೆಯ ಜೈವಿಕ ನಿಯಂತ್ರಣ: ಎಲೆ ತಿನ್ನುವ ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕೆ ಗೊನಿಜೊಸ ನೆಫಾಂಟಿಡಿಸ್, ಎಲಾಸ್ಮಸ್ ನಿಫಾಂಟಿಡಿಸ್, ಬ್ರಾಚಿಮೇರಿಯಾ, ನಸೋಟಿ, ಝಂತೊಪಿಂಪ್ಲಾ, ಎಪೆಂಟಲಿಸ್, ಬ್ರೆಕಾನ್ ಬ್ರೆವಿಕಾರ್ನಿಸ್, ಡಾಯಡೆಗ್ಮಾ, ಟ್ರೈಕೊಸ್ಪಿಲಸ್, ಟೆಟ್ರಾಸ್ಪಿಲಸ್, ಟೆಟ್ರಾಸ್ಟಿಕಸ್ ಹಾಗೂ ಸ್ಪೊಮಟೊಮಿಯಾ, ಪರಾವಲಂಬಿ ಜೀವಿಗಳನ್ನು ಉಪಯೋಗಿಸಲಾಗುತ್ತಿದೆ. ಚಿಗುರು ಭಾಗದಲ್ಲಿ ರಂಧ್ರಕೊರೆಯುವ ರೈನೊಸಿರಸ್ ದುಂಬಿಯ ಹತೋಟಿಗೆ ಮೆಟಾರೈಜಿಯಂ ಶಿಲೀಂದ್ರ ಹಾಗೂ ಬ್ಯಾಕುಲೊವೈರಸ್ ರೋಗಾಣುವನ್ನು ರೋಗಾಣುವನ್ನು ಯಶಸ್ವಿಯಾಗಿ ಕೇರಳ ರಾಜ್ಯದಲ್ಲಿ ಉಪಯೋಗಿಸಲಾಗುತ್ತಿದೆ.

	ಹಣ್ಣಿನ ಬೆಳೆಗಳಲ್ಲಿ ಜೈವಿಕ ನಿಯಂತ್ರಣ: ಹಣ್ಣಿನ ಗಿಡಗಳಿಗೆ ಹಾನಿಯನ್ನುಂಟು ಮಾಡುವ ಮೇಣದ ಜಿಗಿ ಹುಳು (ಮಿಲಿಬಗ್) ಹತೋಟಿಗೆ ಕ್ರಿಪ್ಟೊಲಿಮಸ್ ಎಂಬ ಪರಭಕ್ಷಕ ಕೀಟ ತುಂಬಾ ಪರಿಣಾಮಕಾರಿ. ಈ ಕೀಟವನ್ನು ಕುಂಬಳಕಾಯಿಯ ಮೇಲೆ ವೃದ್ಧಿಮಾಡುವ ತಂತ್ರಜ್ಞಾನ ತುಂಬಾ ಅನುಕೂಲ. ಈ ಜಿಗಿಹುಳುಹತೋಟಿಗೆ ವೆಸ್ಟ್ ಇಂಡಿಸ್ ದೇಶದಿಂದ ಆಮದು ಮಾಡಿಕೊಂಡ ಲೆಪ್ಟೊಮೆಸ್ಟಿಕ್ಸ್ ಡಾಕ್ಟೆಲೊವೆ ಎಂಬ ಪರಾವಲಂಬಿ ಕೀಟವನ್ನು ಸಹ ಉಪಯೋಗಿಸಬಹುದು.

	ತರಕಾರಿ ಬೆಳೆಗಳಲ್ಲಿ ಜೈವಿಕ ನಿಯಂತ್ರಣ: ಟೊಮೆಟೊ ಹಣ್ಣನ್ನು ರಂಧ್ರಮಾಡಿ ತಿನ್ನುವ ಕೀಟ ಹೆಲಿಕೊವರ್ಪಾದ ನಿಯಂತ್ರಣಕ್ಕೆ, ಟೈಕೊಗ್ರಮ್ಮಾ ಹಾಗೂ ಇತರೆ ಪರಾವಲಂಬಿ ಕೀಟಗಳನ್ನು ಉಪಯೋಗಿಸಬಹುದು. ಅಲ್ಲದೆ ಎನ್.ಪಿ.ವಿ. ವೈರಸ್ ರೋಗಾಣುವನ್ನು ಸಹ ಯಶಸ್ವಿಯಾಗಿ ಉಪಯೋಗಿಸಲಾಗುತ್ತಿದೆ. ಎಲೆಕೋಸು ಹಾಗೂ ಹೂಕೋಸಿಗೆ ಹಾನಿಯನ್ನುಂಟುಮಾಡುವ ಪ್ಲೂಟೆಲ್ಲ ಕೀಟ ಬಾಧೆ ನಿವಾರಿಸಲು ಕೊಟಿಸಿಯಾ ಪ್ಲೂಟೆಲ್ಲ ಎಂಬ ಪರಾವಲಂಬಿ ಕೀಟ ತುಂಬ ಪರಿಣಾಮಕಾರಿ ಎಲೆ ಕೆರೆದು ತಿನ್ನುವ ದುಮಬಿ ಎಪಿಲೆಕ್ನಾದ ಹತೋಟಿಗೆ ಪೆಡೊಬಿಯಸ್ ಎಂಬ ಪರಾವಲಂಬಿ ಕೀಟ ಉತ್ತಮ. ಬಿನ್ಸ್ ಗಿಡಕ್ಕೆ ಬರುವ ಕೆಂಪು ನುಶಿಯ ಹತೋಟಿಗೆ ಪರಭಕ್ಷಕ ನುಸಿ ಪೈಟೊಸಿಲಸ್ ಹಾಗು ಎಂಬ್ಲಸಿಯಸ್ ಬಗೆ ಉಪಯೋಗಕಾರಿ.

	ಆಲೂಗಡ್ಡೆ ಬೆಳೆಯ ಜೈವಿಕ ನಿಯಂತ್ರಣ: ಗೆಡ್ಡೆಕೊರಕ ಥೊರಿಮೀಯಾ ಅಪರಕುಲೆಲ್ಲಾ ತುಂಬಾ ಹಾನಿಕಾರಕ. ಇದರ ಹತೋಟಿಗೆ ಕಿಲೊನಸ್ ಬ್ಲಾಕಬರ್ನಿ, ಬ್ರೆಕಾನ ಗೆಲಿಚಿ, ಅಪಾಂಟಾಲಿಸ್ ಬಗೆ ಹಾಗೂ ರೊಪಿಡೊಸೊಮಾ ಕೊಹಿಲೆರಿ ತುಂಬಾ ಉಪಯುಕ್ತ. ಹೊಲದಲ್ಲಿ ಅಲ್ಲದೆ ಗಡ್ಡೆ ಸಂಗ್ರಹಿಸಿರುವ ಕೋಣೆಯಲ್ಲಿಯೂ ಸಹ ಕೊಪಿಡೊಸೊಮಾ ತುಂಬಾ ಪ್ರಯೋಜನಕಾರಿ.

	ಮೇವು ಬೆಳೆಗಳಲ್ಲಿ ಜೈವಿಕ ನಿಯಂತ್ರಣ: ಸುಬಾಬುಲ ಎಂಬ ಹೆಸರಿನ ಮೇವಿನ ಗಿಡವನ್ನು ಹೆಚ್ಚಿನ ಕ್ಷೇತ್ರದಲ್ಲಿ ಬೆಳಸಲಾಗುತ್ತಿದೆ. ಇದಕ್ಕೆ ಹೆಟಿರೊಸಿಲಾ ಕೂಬಾನಾ ಎಂಬ ಎಲೆ ಮುತ್ತುವ ಹುಳು ತುಂಬಾ ಹಾನಿ ಮಾಡಿ ಗಿಡವನ್ನೆ ಸಾಯಿಸುತ್ತದೆ. ಇದರ ಹತೋಟಿಗಾಗಿ ಥಾಯಲ್ಲಾಂಡನಿಂದ ಆಮದು ಮಾಡಿಕೊಂಡ ಕ್ಯೂರಿಸಸ್ ಸಿರೂಲಿಯಸ್ ಎಂಬ ಪರಭಕ್ಷಕ ಕೀಟ ಉಪಯೋಗಿಸಿ ತುಂಬಾ ಲಾಭವಾಗಿದೆ.

	ಕಳೆಗಳ ಜೈವಿಕ ನಿಯಂತ್ರಣ: ನೀರಿನಲ್ಲಿ ವೃದ್ಧಿಯಾಗುವ ಹೈಸಿಂತ ಎಂಬ ಕಳೆ ಎಲ್ಲ ಜಲಾಶಯಗಳಲ್ಲಿ ಬೆಳೆದು ತುಂಬಾ ತೊಂದರೆ ಕೊಡುತ್ತಿದೆ ವಿದ್ಯುತ್ ಉತ್ಪಾದನೆ, ದೋಣಿ ಓಡಿಸಲು ಇದರಿಂದ ತುಂಬಾ ವ್ಯತಯ್ಯವಾಗುತ್ತಿತ್ತು. ಈ ಕಳೆಯನ್ನು ನಿಯಂತ್ರಿಸಲು ನಿಯೊಕೆಟಿನಾ ದುಂಬಿ ಹಾಗೂ ಆರ್ಥೊಗ್ಯಾಲುಮ್ನೆ ಎಂಬ ನುಶಿಯನ್ನು ಯಶಸ್ವಿಯಾಗಿ ಉಪಯೋಗಿಸಲಾಗುತ್ತಿದೆ. ಇದೇ ರೀತಿ ಕೇರಳದಲ್ಲಿ ಸಾಲ್ಪಿನಿಯಾ ಕಳೆ ಭತ್ತದ ಕೃಷಿಗೆ ತುಂಬಾ ಆತಂಕವಾಗಿತ್ತು. ಇದರ ನಿಯಂತ್ರಣಕ್ಕೆ ಸಿರಿಟೊಬ್ಯಾಗಸ್ ಸಾಲ್ವಿನಿಯಾ ಎಂಬ ದುಂಬಿಯನ್ನು ಬ್ರಾಜಿಲ್ ದೇಶದಿಂದ ಆಮದು ಮಾಡಿಕೊಂಡು ಪರಿಣಾಮಕಾರಿಯಾಗಿ ಉಪಯೋಗಿಸಲಾಗುತ್ತಿದೆ. ಮಣ್ಣಿನಲ್ಲಿ ವೃದ್ಧಿಯಾಗಿ ಮನುಷ್ಯರಿಗೆ ಮಾರಕವಾಗಿರುವ ಪಾರ್ಥೆನಿಯಂ ಕಳೆಯನ್ನು ನಿಯಂತ್ರಿಸಲು ಮೆಕ್ಸಿಕೊ ದೇಶದಿಂದ ಆಮದು ಮಾಡಿಕೊಂಡ ಜಾಯಿಗೊಗ್ರಮ್ಮ ದುಂಬಿ ಚನ್ನಾಗಿ ಕೆಲಸ ಮಾಡುತ್ತಿದೆ. ಮಳೆ ಸರಿಯಾಗಿ ಆಗುವ ಪ್ರದೇಶಗಳಲ್ಲಿ ಈ ದುಂಬಿ ಪಾರ್ಥೆನಿಯಂ ಕಳೆಯನ್ನು ಚನ್ನಾಗಿ ನಿಯಂತ್ರಿಸುತ್ತಿದೆ. ಗಾಂದಿ ಗುಲಾಬಿ ಎಂದು ಕರೆಯಲ್ಪಡುವ ಕ್ರೊಮಲೆನಾ ಕಳೆಯ ನಿವಾರಣೆಗೆ ಇಂಡೊನೆಸಿಯಾ ದೇಶದಿಂದ ಆಮದು ಮಾಡಿಕೊಂಡ ಸಿಸಿಡೊಚಾರಿಸ್ ಎಂಬ ನೊಣ ದೇಟಿಗೆ ಗಂಟನ್ನುಂಟುಮಾಡಿ ಗಿಡದ ಬೆಳವಣಿಗೆ ಕುಂಠಿತಗೊಳಿಸುತ್ತದೆ. ಸದ್ಯಕ್ಕೆ ಇದು ಸಂಶೋಧನಾಲಯದಲ್ಲಿ ಪರಿಶೋಧನೆಗೊಳ್ಳುತ್ತಿದೆ.

	ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಗಂಗೆನಹಳ್ಳಿಯಲ್ಲಿರುವ ಪಿ.ಡಿ.ಬಿ.ಸಿ (ಪ್ರಾಜೆಕ್ಟ್ ಡೈರೆಕ್ಟೊರೇಟ ಆಫ್ ಬಯೋಲಾಜಿಕಲ್ ಕಂಟ್ರೊಲ್) ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಅಂಗ ಸಂಸ್ಥೆ. ಈ ಸಂಸ್ಥೆಯ ಮುಖ್ಯ ಕೆಲಸ-ಬೆಳೆಗಳ ಕೀಟ, ರೋಗ, ನೆಮೆಟೊಡ್ ಹಾಗೂ ಕಳೆ ದಮನಕ್ಕಾಗಿ ಜೈವಿಕ ತಂತ್ರಜ್ಞಾನದ ಶೋಧನೆ, ಸಂರಕ್ಷಣೆ, ವಿನಿಮಯ ಹಾಗೂ ಪ್ರಯೋಗಾರ್ಥ ಪರಿಚಯಿಸುವಿಕೆಗೆ ರಾಷ್ಟ್ರ ಮಟ್ಟದ ಕೇಂದ್ರ ಆಗಿರುವುದು. ಅಲ್ಲದೆ ಈ ನಿಟ್ಟಿನ ಸಂಶೋಧನೆಯ ಸಮನ್ವಯ ಹಾಗೂ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.

	ಸ್ವಾಭಾವಿಕ ಶತ್ರುಗಳ ಜೀವ ವೈವಿಧ್ಯ ಪರಿಮಾಣೀಕರಣ ಪಿ.ಡಿ.ಬಿ.ಸಿ.ಯ ಮಹತ್ವದ ಕೆಲಸಗಳಲ್ಲೊಂದು. ಅದರಲ್ಲಿ ಸಂಸ್ಥೆ ರಾಷ್ಟ್ರ ಮಟ್ಟದ ಭಂಡಾರ ಎನಿಸಿದೆ. ಸಂಶೋಧನಾ ಸಿಬ್ಬದಿ ವಿದ್ಯಾರ್ಥಿಗಳು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ 1 ರಿಂದ 90 ದಿನಗಳವರೆಗಿನ ವಿವಿಧ ತರಪೇತಿ ಕಾರ್ಯಕ್ರಮಗಳು ಇಲ್ಲಿವೆ.				(ಬಿ.ಎಸ್.ಭೂಮಣ್ಣನವರ್)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ